 ಬ್ಲೇಕ್, ವಿಲಿಯಮ್
	1757-1827. ಇಂಗ್ಲೀಷ್ ಕವಿ, ಚಿತ್ರಗಾರ ಹಾಗೂ ಅತೀಂದ್ರಿಯವಾದಿ. ಹುಟ್ಟಿದ್ದು ಲಂಡನ್‍ನಲ್ಲಿ ಸಿದ್ಧ ಉಡುಪುಗಳನ್ನು ತಯಾರಿಸುವವನ ಮಗನಾಗಿ. ಈತ ಚಿಕ್ಕಂದಿನಿಂದಲೂ ಭವಿಷ್ಯವನ್ನು ಕಾಣುವ ಕನಸುಗಳ ಕನಸುಗಾರ. ಕಲ್ಪನಾಲೋಕದ ಕಲ್ಪನಾ ವಿಲಾಸವನ್ನು ಈತ ತನ್ನ ಕವಿತೆಗಳು ಹಾಗೂ ಚಿತ್ರಕಲೆಯಲ್ಲಿ ವ್ಯಕ್ತಪಡಿಸಿದ್ದಾನೆ. ಹದಿನಾಲ್ಕನೆಯ ವಯಸ್ಸಿನಲ್ಲಿ ಈತ ಲೋಹದ ಮೇಲೆ ಚಿತ್ರ ಬಿಡಿಸುವವನ ಬಳಿ ಕಲಿಕೆ ವಿದ್ಯಾರ್ಥಿಯಾಗಿ ಸೇರಿ ಅನಂತರ ರಾಯಲ್ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ. ತಾಮ್ರ ಫಲಕಗಳ ಮೇಲೆ ಚಿತ್ರಗಳನ್ನು ಕೊರೆದು ಬಣ್ಣ ಬಳಿದು ಮುದ್ರಿಸುವ ವಿಧಾನವನ್ನು ಅಳವಡಿಸಿದ. ಇದನ್ನು ತನ್ನ ಸಾಹಿತ್ಯ ಕೃತಿಗಳಾದ ಸಾಂಗ್ಸ್ ಆಫ್ ಇನ್ನೊಸೆನ್ಸ್ (1789) ಮತ್ತು ಸಾಂಗ್ಸ್ ಆಫ್ ಎಕ್ಸ್‍ಪೀರಿಯನ್ಸ್ (1794) ಇವುಗಳಿಂದಲೇ ಆರಂಭಿಸಿದ. ಮೇರಿವೂಲ್ಸ್‍ಟನ್‍ಕ್ರಾಫ್ಟ್‍ಳ ಕೃತಿಗಳಿಗೂ (1791) ಯಂಗ್ ನೈಟ್ ಥಾಟ್ಸ್ ಕೃತಿಗೂ ಚಿತ್ರ ಬಿಡಿಸಿದ. ಮತೀಯ ಸಂಬಂಧವಾದ ಅನೇಕ ನಕಾಶೆಗಳನ್ನೂ ಚಿತ್ರಗಳನ್ನೂ ಬಿಡಿಸಿ ಕೊಟ್ಟ. ಅವುಗಳಲ್ಲಿ ಪ್ರಮುಖವಾದದ್ದು ಇನ್‍ವೆನ್ಷನ್ ಟು ದಿ ಬುಕ್ ಆಫ್ ಜೋಬ್ ಮರಣದ ಸಮಯದಲ್ಲಿ ಈತ ದಾಂತೆಯ ಡಿವೈನ್ ಕಾಮಿಡಿಗೆ ಚಿತ್ರಗಳನ್ನು ಬಿಡಿಸುವ ಕೆಲಸದಲ್ಲಿ ತೊಡಗಿದ್ದ. ಜೆರೂಸಲೆಮ್ ವiತ್ತು ಮಿಲ್ಟನ್ ಈತನ ಕೊನೆಯ ಕೃತಿಗಳು. ದಿ ಚಿಮಿನಿ ಸ್ವೀಪರ್, ಹೋಲಿ ಥರ್ಸ್‍ಡೆ, ದಿ ಲ್ಯಾಂಬ್, ದಿ ಸನ್ ಫ್ಲವರ್ ಮುಂತಾದವು ಈತನ ಪ್ರಾರಂಭಿಕ ಕವನಗಳು. 

	ಇಂಗ್ಲಿಷ್ ಕಾವ್ಯದ ಚರಿತ್ರೆಯಲ್ಲೆ ಬ್ಲೇಕ್ ವಿಶಿಷ್ಟ ವ್ಯಕ್ತಿ. ಅಸಾಧಾರಣ ವಿಭಾವನೆ (ಇಮ್ಯಾಜಿನೇಷನ್) ಇವನದು. ಕನಸು(ವಿಷನ್)ಗಳನ್ನು ಕಂಡವನು. ಅನುಭಾವಿ ಕವಿ. ಮಕ್ಕಳಿಗಾಗಿ ಸೊಗಸಾದ ಕವನಗಳನ್ನು ಬರೆದ. ಸರಳವೆಂದು ಕಾಣುವ ಕವನಗಳೂ ಸಂಕೀರ್ಣವಾಗಿರುತ್ತವೆ. ಗಾಢವಾದ ಅರ್ಥಗಳನ್ನು ಹೊಂದಿಸುತ್ತವೆ. ಸುಪ್ರಸಿದ್ಧವಾದ ದ ಟೈಗರ್ ಇದಕ್ಕೊಂದು ನಿದರ್ಶನ. ಸಾಂಗಸ್ ಆಫ್ ಇನೊಸೆನ್ಸ್‍ನಲ್ಲಿ ಶೈಶವ, ಬಾಲ್ಯಗಳ ಮುಗ್ಧತೆ ಸಂತೋಷಗಳನ್ನು ಕುರಿತು ಹಾಡಿದ. ಸಾಂಗ್ಸ್ ಆಫ್ ಎಕ್ಸ್‍ಪೀರಿಯೆನ್ಸ್ ಮತ್ತೊಂದು ಪ್ರಸಿದ್ಧ ಕವನ ಸಂಗ್ರಹ. ಮನುಷ್ಯನ ಆತ್ಮವು ಈ ಜಗತ್ತಿಗೆ ಬರುವ ಮೊದಲು ಅಸ್ತಿತ್ವದಲ್ಲಿರುತ್ತದೆ. ಈ ಜಗತ್ತನ್ನು ಪ್ರವೇಶಿಸುವಾಗ ದೇಹವನ್ನು ಉಡುಪಾಗಿ ಸ್ವೀಕರಿಸುತ್ತದೆ ಎಂದು ಭಾವಿಸಿದೆ. ಅನುಭವದ ಈ ಜಗತ್ತನ್ನು ಪ್ರವೇಶಿಸುವಾಗ ಆತ್ಮವು ತನ್ನ ಜಾಗ್ರತ ಸ್ಥಿತಿಯನ್ನು ಕಳೆದುಕೊಂಡು ಮಾರಕ ನಿದ್ರೆ ಅಥವಾ ಸಾವಿನ ಸ್ಥಿತಿಯನ್ನು ಪಡೆಯುತ್ತದೆ. ಬ್ಲೇಕ್‍ನ ಕಾವ್ಯದಲ್ಲಿ ಎಕ್ಸ್‍ಪೀರಿಯೆನ್ಸ್ ಎಂದರೆ ತಿಳವಳಿಕೆ ತರುವ ಅನುಭವವಲ್ಲ, ಮಾಯೆಯಲ್ಲಿನ ಸ್ಥಿತಿ. ಬ್ಲೇಕ್ ತಾನೇ ಮಿಥ್‍ಗಳನ್ನು ಸೃಷ್ಟಿಸಿದ. ಆದರೆ ಇವು ಓದುಗರಿಗೆ ಅರ್ಥವಾಗದೆ, ಈ ಪ್ರತಿಭಾವಂತ ಕವಿ ಅಸಡ್ಡೆಗೆ ಒಳಗಾದ.

	ಬ್ಲೇಕ್ ರೊಮ್ಯಾಂಟಿಕ್ ಕಾವ್ಯದ ಉದಯವನ್ನು ಸೂಚಿಸಿದ ಕವಿಗಳಲ್ಲೊಬ್ಬ. ಇವನಲ್ಲಿ ಸಾಮಾಜಿಕ ಹೊಣೆಯ ಅರಿವೂ ತೀಕ್ಷ್ಣವಾಗಿತ್ತು ಅಸಾಧಾರಣ ಕಾವ್ಯ ಪ್ರತಿಭೆ ಇದ್ದೂ ಹೆಚ್ಚು ಜನ ಓದುಗರನ್ನು ಮುಟ್ಟಲಾರದೆ ಹೊದ ಕವಿ ವಿಲಿಯಂ ಬ್ಲೇಕ್.  
ಪರಿಷ್ಕರಣೆ:
ಎಲ್. ಎಸ್. ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ